ಇದೊಂದು ಸಂಸ್ಕೃತ ಪದ. ಇದರ ಅರ್ಥ ಕರೆಯುವುದು ಅಥವಾ ಆಹ್ವಾನಿಸುವುದು ಎಂದು. ಯಾವುದಾದರೂ ಪೂಜ್ಯ ಶಕ್ತಿಯನ್ನು ನಾವು ಆಹ್ವಾನಿಸುವುದು ಬಹುಶಃ ಮುಖ್ಯವಾಗಿ ಮೂರು ಉದ್ದೇಶಗಳಿಂದ: 1. ಪವಿತ್ರವಾದುದರೊಡನೆ ಆಪ್ತ ಸಂಬಂಧ (ಕಮ್ಯೂನಿಯನ್) ಏರ್ಪಡಿಸಿಕೊಳ್ಳುವುದು ಅಥವಾ ಒಂದಾಗುವುದು. 2. ಒಪ್ಪಂದ ಮಾಡಿಕೊಳ್ಳುವುದು (ಕನ್ಸಿಲಿಯೇಷನ್)-ಅಂದರೆ ನಾನು ನಿನಗೆ ಇದನ್ನು ಅರ್ಪಿಸುತ್ತೇನೆ, ಬದಲಾಗಿ ನನಗೆ ನನ್ನ ಬಯಕೆಯನ್ನು ಸಲ್ಲಿಸು ಅಥವಾ ಕೇಡನ್ನು ನಿವಾರಿಸು ಎಂದು ಬೇಡಿಕೊಳ್ಳುವುದು. 3. ದೈವದ ಒಳ್ಳೆಯ ಸ್ವಭಾವವನ್ನು ಮೆಚ್ಚಿ ಸ್ವಪ್ರೇರಣೆಯಿಂದ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ತನಗೆ ಇಷ್ಟವಾದುದನ್ನು ದೇವರಿಗೆ ಅರ್ಪಿಸುವುದು. ಮೊದಲ ಎರಡು ಉದ್ದೇಶಗಳಂತೆ ಪೂಜ್ಯವಾದ ಶಕ್ತಿಗೆ ಅರ್ಪಿಸಿದ ಬಲಿ ಎಂಬ ಅರ್ಥದಲ್ಲಿ ಮಾತ್ರ ಈ ಪದ ಹೆಚ್ಚು ಉಪಯೋಗದಲ್ಲಿದೆ. ಮೂರನೆ ಬಗೆಯ ಅರ್ಪಣೆ ಅನಾಗರಿಕ ಮತಗಳಲ್ಲಿ ಅಷ್ಟಾಗಿ ಕಾಣದಿದ್ದರೂ ಸಂಪೂರ್ಣವಾಗಿ ಇಲ್ಲವೇ ಇಲ್ಲವೆಂದು ಹೇಳಲಾಗುವುದಿಲ್ಲ. ಅನಾಗರಿಕ ಮತದವರಲ್ಲಿ ವಿಶೇಷವಾಗಿ ನರಮೇಧ ಮತ್ತು ಪಶುಮೇಧ ರೂಪದಲ್ಲಿದ್ದರೂ ಹಣ್ಣು, ಕಾಯಿ, ಕಾಳು ಮುಂತಾದುವುಗಳ ಅರ್ಪಣೆ ಇಲ್ಲದಿಲ್ಲ. ಈ ಅರ್ಪಣೆಗಳೆಲ್ಲ ದ್ರವ್ಯಯಜ್ಞಗಳು. ಯಾವುದೊಂದು ವಸ್ತುವನ್ನೂ ಅರ್ಪಿಸದೆ ಯಾವುದೊಂದು ಪ್ರತಿಫಲವನ್ನೂ ಅಪೇಕ್ಷಿಸದೆ ಕೇವಲ ಮಾನಸಿಕವಾದ ಆತ್ಮಾರ್ಪಣೆ ಅಥವಾ ಆತ್ಮಯಜ್ಞದ ಮೂಲಕ ಪವಿತ್ರಭಾವನೆಯನ್ನು ಅಭಿವ್ಯಕ್ತಿಗೊಳಿಸುವುದು ತುಂಬ ಮೇಲುಮಟ್ಟದ ಆಹುತಿ. ಧ್ಯಾನ, ಪ್ರಾರ್ಥನೆ, ಸ್ವಾರ್ಥತ್ಯಾಗ, ಮಾನಸಿಕ ನೈರ್ಮಲ್ಯ-ಇವುಗಳೇ ಈ ಆತ್ಮಯಜ್ಞದ ಮುಖ್ಯ ರೂಪಗಳು. ದ್ರವ್ಯಯಜ್ಞವಿಲ್ಲದೆ ಪ್ರಾರ್ಥನೆ ಇರಬಹುದು. ಆದರೆ ಪ್ರಾರ್ಥನೆ ಇಲ್ಲದೆ ಯಾವ ದ್ರವ್ಯಯಜ್ಞವೂ ಇರುವುದಿಲ್ಲವಾದುದರಿಂದ ಮಾನಸಿಕ ಅಂಶ ಎಲ್ಲ ರೀತಿಯ ಪವಿತ್ರಭಾವನೆಯ ಅಭಿವ್ಯಕ್ತಿಯಲ್ಲೂ ಲೇಶವಾದರೂ ಇದ್ದೇ ಇರುತ್ತದೆ. ಜನರ ಮತಭಾವನೆಗಳು ಕೆಲವು ಮಟ್ಟಗಳಲ್ಲಿ ಒಂದು ಅಂಶವನ್ನು ಹೆಚ್ಚಾಗಿ ಪಡೆಯಬಹುದು. ಇನ್ನೊಂದು ಅಂಶವನ್ನು ಕಡಿಮೆ ಪ್ರಮಾಣದಲ್ಲಿ ಪಡೆದಿರಬಹುದು. ಆದರೂ ಮತದ ಎಲ್ಲ ಹಂತಗಳಲ್ಲೂ ಆಧ್ಯಾತ್ಮಿಕ ಅಂಶ ಇದ್ದೇ ಇರುತ್ತದೆ. ಕೆಲವು ಕ್ರೈಸ್ತ ಗುಂಪಿನವರು ದ್ರವ್ಯಯಜ್ಞವನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಇನ್ನು ಕೆಲವು ಕ್ರೈಸ್ತ ಗುಂಪುಗಳಲ್ಲಿ ದ್ರವ್ಯಯಜ್ಞ ಸ್ವಲ್ಪ ಮಟ್ಟಿಗಾದರೂ ಇದ್ದೇ ಇದೆ. ಇನ್ನು ಯಜ್ಞ ಸ್ವರೂಪ ಪ್ರಾಕೃತರ ಮತದಲ್ಲಿ ಮತ್ತು ಕೆಲವು ಮುಖ್ಯವಾದ ನಾಗರಿಕರ ಮತಗಳಲ್ಲಿ ಯಾವ ಬಗೆಯಾಗಿದೆ ಎಂಬುದನ್ನು  ಸ್ಥೂಲವಾಗಿ ಪರಿಚಯ ಮಾಡಿಕೊಳ್ಳಬಹುದು. 

ಪ್ರಾಕೃತ ಜನ ಸಾಮಾನ್ಯವಾಗಿ ಒಂಟಿಯಾಗಿ ಬಲಿ ಅರ್ಪಿಸುವುದಕ್ಕಿಂತ ಗುಂಪಿನಲ್ಲಿ ಅರ್ಪಿಸುವುದು ವಾಡಿಕೆ. ಅವರು ಕುಲದೇವತೆಗೆ ಬಲಿ ಅರ್ಪಿಸಬಹುದು ಅಥವಾ ಸತ್ತವನ ಪ್ರೇತಕ್ಕೆ ಅರ್ಪಿಸಬಹುದು. ಅರ್ಪಣೆಯ ವಸ್ತು ಕೆಲವು ವೇಳೆ ಒಬ್ಬ ಮನುಷ್ಯನಾಗಬಹುದು, ಸಾಮಾನ್ಯವಾಗಿ ಒಂದು ಕುರಿ, ಮೇಕೆ ಅಥವಾ ಪ್ರಾಣಿಯಾಗಬಹುದು. ವ್ಯವಸಾಯದ ಮಟ್ಟವನ್ನು ಮುಟ್ಟಿದ ಪ್ರಾಕ್ತನರು ತಾವು ಬೆಳೆದ ಕಾಳು ಹಣ್ಣು ಕಾಯಿಗಳನ್ನು ಅರ್ಪಿಸಬಹುದು. ಹೀಗೆ ಅರ್ಪಿಸಿದುದರಲ್ಲಿ ಸ್ವಲ್ಪಭಾಗವನ್ನು ಯಜ್ಞ ಮಾಡಿದವರು ಪ್ರಸಾದವಾಗಿ ಸೇವಿಸಿ ದೈವದ ಶಕ್ತಿ ತಮ್ಮೊಳಗೆ ಪ್ರವೇಶಿಸಿ ತಮಗೆ ಶಕ್ತಿ ಕೊಡುತ್ತದೆ ಅಥವಾ ತಮ್ಮಲ್ಲಿರುವ ಕುಂದನ್ನು ನಿವಾರಿಸುತ್ತದೆ ಎಂದು ಸಮಾಧಾನ ಪಡೆಯುತ್ತಾರೆ. ಈ ಉದ್ದೇಶದಿಂದಲ್ಲದೆ ಕೆಲವು ವೇಳೆ ತಮ್ಮ ಆಡಿನ, ಕುರಿಯ ಅಥವಾ ಎಮ್ಮೆಗಳ ಮಂದೆ ವೃದ್ಧಿಯಾಗಲೆಂದು ಆಯಾ ಪ್ರಾಣಿಯನ್ನು ದೈವಕ್ಕೆ ಬಲಿ ಕೊಡುವುದೂ ಉಂಟು. ಸತ್ತವರ ಸಮಾಧಿಯಲ್ಲಿ ವಿವಿಧ ಆಹಾರಗಳನ್ನು ಇಡುವುದಲ್ಲದೆ ಜೊತೆಗೆ ಕೆಲವುವೇಳೆ ಅವರ ಕೊಡಲಿ, ಗದೆ ಮುಂತಾದ ಆಯುಧಗಳನ್ನೂ ಇಡುವುದುಂಟು. ಕೆಲವು ಅನಾಗರಿಕ ಗುಂಪಿನವರು ಸತ್ತವರ ಶಕ್ತಿ ತಮ್ಮೊಳಗೆ ಪ್ರವೇಶಿಸಲೆಂದು ಸತ್ತವರ ಶರೀರದಲ್ಲಿ ಸ್ವಲ್ಪ ಭಾಗವನ್ನು ತಿನ್ನುತ್ತಾರೆ. ಅಥವಾ ತಮ್ಮ ದೇಹದ ರಕ್ತವನ್ನು ಶವದೊಳಕ್ಕೆ ಸೇರಿಸುತ್ತಾರೆ. ವೇದದ ಕಾಲದ ಹಿಂದೂಗಳು ತಾವು ಮಾಡಬೇಕಾದ ಕರ್ಮಗಳನ್ನು ನಿತ್ಯ ಮತ್ತು ನೈಮಿತ್ತಿಕ ಎಂದು ಎರಡು ಬಗೆಯಾಗಿ ವಿಂಗಡಿಸಿರುತ್ತಾರೆ. ನಿತ್ಯ ಕರ್ಮಗಳು ಪ್ರತಿದಿನವೂ ಪಕ್ಷಗಳಲ್ಲಿ, ಪುಣ್ಯಕಾಲಗಳಲ್ಲಿ ಅಗತ್ಯವಾಗಿ ಮಾಡಬೇಕಾದುವು. ನೈಮಿತ್ತಿಕ ಕರ್ಮಗಳು ಇಷ್ಟಗಳ ಪುರೈಕೆಗಾಗಿ ಮಾಡತಕ್ಕ ಐಚ್ಛಿಕ ಕರ್ಮಗಳು. ಪ್ರಾಯಶ್ಚಿತ್ತ ಕರ್ಮಗಳು ಇವೆರಡರ ಅಂಗಗಳಾಗಿ ಕರ್ಮಗಳಲ್ಲಿನ ಲೋಪದೋಷ ನಿವಾರಣೆಗಾಗಿ ಮಾಡತಕ್ಕವು. ಅಗ್ನಿಹೋತ್ರ ಸಂಧ್ಯಾವಂದನೆ ನಿತ್ಯಕರ್ಮಗಳು. ಇವುಗಳಲ್ಲಿ ಆಹುತಿಗಾಗಿ ಅರ್ಪಿಸುವ ವಸ್ತುಗಳು ಯವ, ಹಾಲು, ಮೊಸರು, ಜೇನುತುಪ್ಪ, ತುಪ್ಪ ಮುಂತಾದುವು. ಅರ್ಘ್ಯಕ್ಕಾಗಿ ಉಪಯೋಗಿಸುವ ವಸ್ತು ನೀರು. ಪಿತೃಗಳಿಗಾಗಿ ಅರ್ಪಿಸುವುದು ತಿಲೋದಕ ಮತ್ತು ಪಿಂಡ. ನೈಮಿತ್ತಿಕ ಕರ್ಮಗಳು ಯಜ್ಞಯಾಗಗಳು ಮೊದಲಾದುವುಗಳ ಉದ್ದೇಶ ಸ್ವರ್ಗಕಾಮ, ಪುತ್ರಕಾಮ, ಐಶ್ವರ್ಯಕಾಮ, ರಾಷ್ಟ್ರದ ಸ್ಥಿರತೆ ಇತ್ಯಾದಿ. ಅಶ್ವಮೇಧ, ನರಮೇಧಗಳಲ್ಲಿ ಪ್ರಾಣಿಗಳನ್ನು ಬಲಿಕೊಡುವುದು ವಾಡಿಕೆಯಾಗಿತ್ತು. ಕಾಲಕ್ರಮದಲ್ಲಿ ನರಮೇಧ ನಿಂತುಹೋಯಿತು. ಪ್ರಾಣಿಗಳನ್ನು ಬಲಿ ಕೊಡುವ ಸಂಪ್ರದಾಯವೂ ಕಡಿಮೆಯಾಗುತ್ತಿದೆ. 

ವೇದದ ಕಾಲದಿಂದ ಈಚೆಗೆ ಬಹುಶಃ ಜೀವದಯೆಯನ್ನೇ ಮುಖ್ಯ ಧರ್ಮವಾಗಿ ಅನುಸರಿಸಿದ ಬೌದ್ಧ ಮತ್ತು ಜೈನ ಧರ್ಮಗಳು ಹುಟ್ಟಿದ ಮೇಲೆ, ದೇವರ ಪ್ರೀತಿಯೇ ಪರಮಧರ್ಮವಾಗಿ ಉಳ್ಳ ವೈಷ್ಣವಮತ ಬೆಳೆದ ಅನಂತರ ವೈದಿಕರ ಯಜ್ಞಭಾವನೆಯಲ್ಲಿ ಪರಿವರ್ತನೆಯಾಗಿದೆ. ಬೌದ್ಧ, ಜೈನ ಧರ್ಮಗಳು ದ್ರವ್ಯಯಜ್ಞವನ್ನು ತ್ಯಜಿಸಿ ಆತ್ಮಯಜ್ಞವನ್ನು ಅನುಸರಿಸಿವೆ. ಭಾಗವತ ಪಂಥದ ಭಗವದ್ಗೀತೆ ದ್ರವ್ಯ ಯಜ್ಞಕ್ಕಿಂತ ಆತ್ಮಯಜ್ಞವನ್ನು ಪುರಸ್ಕರಿಸಿದೆ. ಶುದ್ಧಮನಸ್ಸಿನಿಂದ ಶ್ರದ್ಧಾಭಕ್ತಿಯಿಂದ ಮಾಡಿದ ಆತ್ಮಾರ್ಪಣೆ ವಿಷ್ಣುವಿಗೆ ಮೆಚ್ಚಿಕೆಯಾದ ಯಜ್ಞ. ಶಂಕರಾಚಾರ್ಯರು ಕರ್ಮಕ್ಕಿಂತ ಜ್ಞಾನೋಪಾಸನೆ ಮೇಲೆಂದು ಬೋಧಿಸಿದ ಮೇಲೆ ಯಜ್ಞಕರ್ಮಗಳಿಗೆ ಪ್ರಾಶಸ್ತ್ಯ ಕಡಿಮೆಯಾಯಿತು. ನಿಷ್ಕಾಮಸೇವೆಯೇ ಪರಮ ಪವಿತ್ರವಾದ ಯಜ್ಞವೆಂದು ಸಾರಿದ. ಮಹಾತ್ಮ ಗಾಂಧಿಯವರ ಪ್ರಭಾವದಿಂದ ಕಾಳಿ ಮುಂತಾದ ದೇವತೆಗಳಿಗೆ ನಡೆಸುತ್ತಿದ್ದ ಪಶುಮೇಧ ಬಹಿಷ್ಕೃತವಾಗುತ್ತಿದೆ. ಹಿಂದೂಗಳಲ್ಲಿ ಕೆಲವರು ಮಾಟಕ್ಕಾಗಿ ಕೋಳಿ ಮುಂತಾದ ಪ್ರಾಣಿಗಳನ್ನು ಕ್ಷುದ್ರ ಶಕ್ತಿಗಳಿಗೆ ಆಹುತಿ ಕೊಡುತ್ತಾರೆ. ಸತ್ಸಸಂಪ್ರದಾಯದವರು ಇದನ್ನು ನಿಷೇಧಿಸಿರುತ್ತಾರೆ. 

ಮುಸ್ಲಿಮರಲ್ಲಿ ಯಜ್ಞಕಾರ್ಯವಿಲ್ಲ. ಪಾಪ ಮಾಡಿದವನಿಗೆ ಪಾಪವಿಮೋಚನೆಗಾಗಿ ಅವರು ಪಶುಯಜ್ಞವನ್ನು ನಿಯಮಿಸಿಲ್ಲ. ಆದರೆ ಅವರಲ್ಲಿ ಪಾಪ ಮಾಡಿದವ ಪ್ರಾಯಶ್ಚಿತ್ತಕ್ಕಾಗಿ ಹತ್ತು ಜನರಿಗೆ ಊಟ ವಸ್ತ್ರಗಳನ್ನು ಕೊಡಬೇಕು, ಅಥವಾ ಒಬ್ಬ ಗುಲಾಮನಿಗೆ ಸ್ವಾತಂತ್ರ್ಯವನ್ನು ಕೊಡಬೇಕು. ಅನ್ನವಸ್ತ್ರಗಳನ್ನು ಕೊಡಲು ಚೈತನ್ಯವಿಲ್ಲದವ ಮೂರು ದಿವಸಗಳ ಪರ್ಯಂತ ಉಪವಾಸ ಆಚರಿಸಬೇಕೆಂಬ ನಿಯಮವಿದೆ. ಯಾತ್ರೆಯ ಉಡುಪಿನಲ್ಲಿರುವಾತ ಬೇಟೆಯಾಡಿ ಯಾವುದಾದರೂ ಪ್ರಾಣಿಯನ್ನು ಕೊಂದರೆ ಅದಕ್ಕೆ ಪ್ರತಿಯಾಗಿ ತನ್ನ ಮನೆಯಲ್ಲಿರುವ ಒಂದು ಕುರಿಯನ್ನೋ ಪಾರಿವಾಳವನ್ನೋ ಕೊಂದು ಕಾಬಾದಲ್ಲಿ ಅರ್ಪಿಸಬೇಕು. ಹೀಗೆ ಮಾಡಬೇಕೆಂದು ವಿಧಿಸಿರುವುದು ಪಾಪವಿಮೋಚನೆಗಾಗಿ ಅಲ್ಲ; ಕಾನೂನನ್ನು ಮುರಿದದ್ದಕ್ಕಾಗಿ. ಪಾಪವಿಮೋಚನೆಗೆ ಇಸ್ಲಾಂ ಮತ ವಿಧಾಯ ಮಾಡಿರುವುದು ಮುಖ್ಯವಾಗಿ ಪಶ್ಚಾತ್ತಾಪ. ಆದರೂ ಕೆಲವು ಮುಸ್ಲಿಮರು ಹಿಂದಿನಿಂದ ಜನರಲ್ಲಿ ರೂಢಿಯಲ್ಲಿದ್ದ ಹರಕೆಯ ಸಂಪ್ರದಾಯವನ್ನನುಸರಿಸಿ ಒಂದು ಮಗುವಾದಾಗ ಅಥವಾ ಒಳ್ಳೆಯದಾದಾಗ ಒಂದು ಕುರಿಯನ್ನು ಬಲಿ ಕೊಡುವುದುಂಟು. ಅರಬ್ಬರು ಮೆಕ್ಕದ ಹತ್ತಿರವಿರುವ ಮದೀನ ಎಂಬ ಸ್ಥಳದಲ್ಲಿ ಕುರಿಗಳನ್ನು ವರ್ಷಕ್ಕೊಮ್ಮೆ ಬಲಿ ಕೊಡುತ್ತಾರೆ. ಇದು ಕೂಡ ಅರಬ್ಬಿಯ ಪೂರ್ವಚರವೇ ಹೊರತು ತಮ್ಮ ಮತಸಂಪ್ರದಾಯವೆಂದು ಮುಸ್ಲಿಮರು ಭಾವಿಸುವುದಿಲ್ಲ. ಇದು ಬಡಬಗ್ಗರಿಗಾಗಿ ಏರ್ಪಡಿಸಿದ ಕೇವಲ ಖಾಸಗಿ ಸತ್ಕಾರ. ಮುಸ್ಲಿಮರು ಪ್ರಾಣಿಗಳನ್ನು ಆಹಾರಕ್ಕಾಗಿ ಕೊಲ್ಲುವುದು ಮತೀಯ ಸಂಸ್ಕಾರವಲ್ಲ. ಆದರೂ ಪ್ರಾಣಿಗೆ ಹೆಚ್ಚು ನೋವಾಗದಂತೆ ಅದನ್ನು ಕೊಲ್ಲಬೇಕೆಂದು ಇಸ್ಲಾಂ ಮತ ನಿಯಮಿಸಿದೆ. ಮುಸ್ಲಿಮರು ವಧಿಸಿದ ಪ್ರಾಣಿಯ ಮಾಂಸವನ್ನು ಮಾತ್ರ ತಿನ್ನುತ್ತಾರೆ; ಅದರ ರಕ್ತವನ್ನು ಬಿಸಾಡುತ್ತಾರೆ. 
ಕ್ರೈಸ್ತಧರ್ಮ ಹುಟ್ಟಿದ್ದು ಯಹೂದಿ ಮತವನ್ನು ನಾಶಗೊಳಿಸುವುದಕ್ಕಲ್ಲ, ಅದನ್ನು ಪರಿಪೂರ್ಣಗೊಳಿಸುವುದಕ್ಕಾಗಿ ದೇವರ ಕಾನೂನನ್ನು ಪಾಲಿಸಿ ಅದಕ್ಕೆ ವಿಧೇಯವಾಗಿ ಹೃತ್ಪೂರ್ವಕವಾಗಿ ನಡೆಯುವುದನ್ನು ಯಹೂದಿ ಮತ ಒತ್ತಿ ಹೇಳುತ್ತದೆ. ಕ್ರಿಸ್ತ ಆ ಅಂಶವನ್ನು ಪೂರ್ಣವಾಗಿ ಒಪ್ಪಿ ಅದನ್ನೇ ಕ್ರೈಸ್ತಧರ್ಮದ ಮೂಲಭೂತ ತತ್ತ್ವವಾಗಿ ಪ್ರತಿಪಾದಿಸಿದ್ದಾನೆ. ಬಾಹ್ಯ ಸಂಸ್ಕಾರಗಳು ಗೌಣವೆಂದೂ ಆಂತರಿಕ ಭಕ್ತಿಯೇ ಪ್ರಧಾನವೆಂದೂ ಒತ್ತಿ ಹೇಳಿದ್ದಾನೆ. ಕಾಲಕ್ರಮದಲ್ಲಿ ಈ ಬಾಹ್ಯ ಸಂಸ್ಕಾರಗಳು, ಯಜ್ಞಗಳು ಅಳಿದು ಕೃತಜ್ಞತಾಪುರ್ವಕವಾದ ವಂದನಾರ್ಪಣೆ ಮತ್ತು ಪ್ರಾರ್ಥನೆ ಅಳಿಯದೆ ಉಳಿದುಕೊಳ್ಳುತ್ತವೆ. ಯಹೂದ್ಯರ ದೇವಾಲಯದಲ್ಲಿ ಬಲಿಪೀಠವಿರುತ್ತದೆ. ಆದರೆ ಕ್ರೈಸ್ತರ ಚರ್ಚಿನಲ್ಲಿ ಇರುವುದಿಲ್ಲ. ಚರ್ಚು ಪ್ರಾರ್ಥನಾಮಂದಿರವೇ ಹೊರತು ಯಜ್ಞಮಂದಿರವಲ್ಲ. ಪ್ರಾರ್ಥನೆಯೇ ಅವರು ಮಾಡುವ ಯಜ್ಞ. ದೇವರೊಂದಿಗೆ ತಮ್ಮ ಹೃದಯವನ್ನು ಕೂಡಿಸುವುದೇ ಪವಿತ್ರವಾದ ಪೂಜೆ. ಕ್ರೈಸ್ತ ದೇವರಿಗೆ ರಕ್ತದ ಅರ್ಪಣೆ ಮತ್ತು ಧೂಪಾರಾಧನೆಗಳ ಅಗತ್ಯವಿಲ್ಲ. ಊಟ ಮಾಡುವಾಗ ಕೃತಜ್ಞತಾಪೂರ್ವಕವಾಗಿ ದೇವರನ್ನು ವಂದಿಸಿದರೆ ಸಾಕು. 

ಕಾಲಕ್ರಮದಲ್ಲಿ ಸಂತರ ವಿಗ್ರಹಗಳನ್ನು ಪೂಜೆಮಾಡಿ, ಧೂಪದೀಪಗಳನ್ನೂ ಅರ್ಘ್ಯಪಾನೀಯಗಳನ್ನು ಅರ್ಪಿಸುವ ಸಂಸ್ಕಾರ ರೂಢಿಗೆ ಬಂತು. ಇತ್ತೀಚೆಗೆ ಸಂತರಿಗೆ ಪೂಜೆ ಸಲ್ಲಿಸುವುದು ಕ್ರಿಸ್ತನ ಉಪದೇಶಕ್ಕೆ ವಿರುದ್ಧವೆಂಬ ಭಾವನೆ ಪ್ರಚಾರಕ್ಕೆ ಬರುತ್ತಿದೆ. ಹಾಗೆಯೇ ಪ್ರಭುಭೋಜನಸಂಸ್ಕಾರವನ್ನು (ಯೂಕರಿಸ್ಟ್) ವಿಸ್ತರಿಸಿ ಅದನ್ನು ನಾಟಕೀಯವಾಗಿ ಆಚರಿಸುವ ವಾರ್ಷಿಕ ಕಟ್ಟಳೆ ರೂಢಿಗೆ ಬಂತು. ಜೊತೆಗೆ (ಬೂದಿ) ಬುಧವಾರ ಮತ್ತು (ಶುಭ) ಶುಕ್ರವಾರದ ದಿನಗಳಲ್ಲೂ ಹಲವು ಸಂಸ್ಕಾರಗಳು ಆಚರಣೆಗೆ ಬಂದುವು. 
ಚೀನಿಯರು ದೇವತೆಗಳಿಗೂ ಪಿತೃಗಳಿಗೂ ಆಹುತಿ ಅರ್ಪಿಸುತ್ತಾರೆ. ಬಲಗೈಯಲ್ಲಿ ಮಾಂಸವನ್ನು ಹಿಡಿದು ದೇವರುಗಳಿಗೆ ಅರ್ಪಿಸುವ ಸಂಸ್ಕಾರವನ್ನು ಅವರುಚಿ ಎಂದು ಕರೆಯುತ್ತಾರೆ. ಈ ಮೂಲಕ ಅವರು ದೇವರುಗಳೊಡನೆ ಆಪ್ತಸಂಬಂಧವೇರ್ಪಡಿಸಿಕೊಂಡು ಒಂದಾಗುತ್ತಾರೆ. ಕನ್ಫ್ಯೂಷಿಯಸ್ನ (ಕೂಂಗ್ಪುಷೆ) ಅನುಯಾಯಿಗಳು ಪಿತೃಪೂಜೆಗೆ ಹೆಚ್ಚು ಮನ್ನಣೆ ಕೊಡುತ್ತಾರೆ. ದೇವರುಗಳಿಗಾಗಲೀ ಪಿತೃಗಳಿಗಾಗಲೀ ಅರ್ಪಿಸಿದ್ದನ್ನು ಶುದ್ಧಾಂತಃಕರಣದಿಂದ ಬಾಹ್ಯಾಡಂಬರವಿಲ್ಲದೆ ಅರ್ಪಿಸಬೇಕು ಎಂದು ಕನ್ಫ್ಯೂಷಿಯಸ್ ಒತ್ತಿ ಹೇಳಿದ್ದಾನೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ